ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಲೋಕದ ಮುತ್ತುಗಳು ಪೋಣಿಸಲ್ಪಡಲಿ

ಲೇಖಕರು : ಉದಯವಾಣಿ
ಭಾನುವಾರ, ಜನವರಿ 19 , 2014

ಯಕ್ಷಗಾನ ಲೋಕದಲ್ಲಿ ದಂತಕಥೆಯಾಗಿರುವ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನೀಡುವ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಶನಿವಾರ ಯಕ್ಷಗಾನ ಲೋಕದ ಸಾಮ್ರಾಟ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಪ್ರದಾನವಾಗಲಿದೆ. ಈವರೆಗೆ ವಿವಿಧ ಕ್ಷೇತ್ರದ ಹಲವು ಗಣ್ಯರು ಶಿವರಾಮ ಹೆಗಡೆ ಪ್ರಶಸ್ತಿ ಪಡೆದಿದ್ದರೂ ಚಿಟ್ಟಾಣಿ ಈ ಪ್ರಶಸ್ತಿ ಪಡೆಯುತ್ತಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.

ಶಿವಾನಂದ ಹೆಗಡೆ ಮತ್ತು ಸ್ನೇಹಿತರು ಅಳುಕುತ್ತಲೇ ಚಿಟ್ಟಾಣಿಯವರ ಮನೆಗೆ ಹೋಗಿ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಆಹ್ವಾನಿಸಿದಾಗ ತಕ್ಷಣ ಒಪ್ಪಿಕೊಂಡ ಚಿಟ್ಟಾಣಿ ಶಿವರಾಮ ಹೆಗಡೆ ನನ್ನ ಅಂತರಂಗದ ಗುರುಗಳು. ಸಂತೋಷದಿಂದ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದರು. ಪ್ರಶಸ್ತಿ ಘೋಷಿಸಿದ ಟ್ರಸ್ಟ್‌ ಸದಸ್ಯರು ಎಷ್ಟು ಸಹೃದಯರೋ, ಸ್ವೀಕರಿಸಲು ಒಪ್ಪಿದ ಚಿಟ್ಟಾಣಿ ಸಹ ಅಷ್ಟೇ ಸಹೃದಯರು. ಪ್ರಶಸ್ತಿ ಕೊಡುವ ವಿಚಾರ ವಿನಿಮಯ ನಡೆದಾಗ ಭಿನ್ನ ಅಭಿಪ್ರಾಯಗಳು ಮೂಡಿಬಂದರೂ ಇದಕ್ಕೆ ಮಹತ್ವ ಕೊಡದೇ ಶಂಭು ಹೆಗಡೆಯವರ ಶ್ರೀಮತಿ ಗೌರಕ್ಕ ಸಹಿತ ಎಲ್ಲ ಟ್ರಸ್ಟಿಗಳೂ ಚಿಟ್ಟಾಣಿ ಹೆಸರನ್ನು ಒಮ್ಮತದಿಂದ ಆಯ್ಕೆ ಮಾಡಿದರು.

ಸಮಾರ೦ಭವೊದರಲ್ಲಿ ಕೆರೆಮನೆ ಶ೦ಭು ಹೆಗಡೆ ಹಾಗೂ ಚಿಟ್ಟಾಣಿ ರಾಮಚ೦ದ್ರ ಹೆಗಡೆ
ಶಿವರಾಮ ಹೆಗಡೆಯವರ ಜೊತೆ ವೇಷ ಮಾಡಿ ಅವರನ್ನು ನೋಡಿ ಸಾಕಷ್ಟು ಕಲಿತು ಯಕ್ಷಲೋಕದ ಎಲ್ಲ ಸಣ್ಣ ದೊಡ್ಡ ನಟರಿಂದ ಒಳ್ಳೆಯ ಅಂಶವನ್ನು ಸ್ವೀಕರಿಸಿ ಯಾರನ್ನೂ ಅನುಸರಿಸದೇ, ಅನುಕರಿಸದೇ ತನ್ನದಾದ ಶೈಲಿಯನ್ನು ಕಂಡುಕೊಂಡ ಚಿಟ್ಟಾಣಿ ತನ್ನದೇ ಮಾರ್ಗದಲ್ಲಿ ಪ್ರತ್ಯೇಕವಾಗಿ ಬೆಳೆದರು. ಇದೇ ಸುಮಾರು ತಂದೆಯ ಪ್ರಭಾವಕ್ಕೆ ಪೂರ್ತಿ ಒಳಗಾಗದೇ ಅವರ ಕಟು ಟೀಕೆಯನ್ನು ಸಹಿಸಿಕೊಂಡು ತನ್ನದಾದ ಶೈಲಿಯನ್ನು ರೂಪಿಸಿಕೊಂಡು, ತನ್ನ ಮಾರ್ಗವನ್ನು ಕಂಡುಕೊಂಡವರು ಕೆರೆಮನೆ ಶಂಭು ಹೆಗಡೆ. ಈ ಇಬ್ಬರೂ ನಾಡಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ಅವಧಿಯಲ್ಲಿ ಹಾಲಿಗೆ ಹುಳಿ ಹಿಂಡುವವರು ತಮ್ಮ ಕೆಲಸ ಮಾಡಿದರು. ಇಬ್ಬರನ್ನು ಒಂದು ವೇದಿಕೆಗೆ ತಂದು ತಮಾಷೆ ನೋಡಲು ಸಾಧ್ಯವಾಗದಿದ್ದಾಗ ದೂರ ಇಡುವ ಕೆಲಸ ಮಾಡಿದರು. ಅಂತೆಕಂತೆಗಳು ಎರಡು ಮಹಾನ್‌ ಕಲಾವಿದರ ನಡುವಿನ ಅಂತರ ಹೆಚ್ಚಿಸಿತ್ತು. ಆದರೆ ಇವರಿಬ್ಬರೂ ವೇದಿಕೆಯಲ್ಲಿ ಒಂದಾಗದಿದ್ದರೂ ಕಲಾಕ್ಷೇತ್ರದಲ್ಲಿ ಸಮಾನ ದು:ಖೀಗಳು, ಸುಖೀಗಳೂ ಆದ್ದರಿಂದ ಅಂತರಂಗದಲ್ಲಿ ಪರಸ್ಪರ ಗೌರವ ಇತ್ತು ಎಂಬುದಕ್ಕೆ ಹೇರಳ ಉದಾಹರಣೆಗಳಿವೆ.

ಯಕ್ಷಗಾನ ಲೋಕದಲ್ಲಿ ರಾತ್ರಿ ಬಣ್ಣ ಹಚ್ಚುವ ನಟರಿಗಿಂತ ಹಗಲು ಬಣ್ಣ ಹಚ್ಚದೇ ನಟಿಸುವವರ ಸಂಖ್ಯೆ ಹೆಚ್ಚಿದೆ. ಇವರ ಕಾಟ ಕೆಲವೊಮ್ಮೆ ಕಲಾವಿದರಿಗೂ ಕಷ್ಟಕೊಟ್ಟಿದೆ. ಶಂಭು ಹೆಗಡೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಯಕ್ಷಗಾನದ ಪ್ರದರ್ಶನ, ಶಿಕ್ಷಣ, ಪ್ರಚಾರಕ್ಕೆ ತನ್ನನ್ನು ಸಮರ್ಪಿಸಿಕೊಂಡು ಭೂಗೋಲ ಸುತ್ತಿ ಬಂದರು. ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದರು. ಪ್ರತಿಭೆ ಹಲವು ದಿಕ್ಕಿನಲ್ಲಿ ಪ್ರಕಾಶಿತವಾಯಿತು. ಯಕ್ಷಗಾನಕ್ಕೆ ಶಾಶ್ವತ ಕೊಡುಗೆ ನೀಡಿದರು. ಮಗ ಶಿವಾನಂದನನ್ನು ತನ್ನ ಕೆಲಸವನ್ನು ವಿಸ್ತರಿಸಿ, ಮುಂದುವರಿಸಲು ತರಬೇತಿ ಕೊಟ್ಟು ಹೊರಟು ಹೋದರು. ಯಕ್ಷಗಾನ ಹೊರತು ಬೇರೆನೂ ಬೇಡ ಎಂದು ಬೆಳೆದ ಚಿಟ್ಟಾಣಿ ತಾರಾಮೌಲ್ಯದ ನಟನಾಗಿ ಉಳಿದುಕೊಂಡು ಪದ್ಮಶ್ರೀ ತಂದುಕೊಟ್ಟರು. 10 ಸಾವಿರಕ್ಕೂ ಹೆಚ್ಚು ರಾತ್ರಿಗಳಲ್ಲಿ ಪ್ರೇಕ್ಷಕರ ಸಂತೋಷಕ್ಕೆ ಕಾರಣರಾದರು. ಮಕ್ಕಳನ್ನು ತರಬೇತಿಗೊಳಿಸಿದರು. ನೂರಾರು ನಟರು ಚಿಟ್ಟಾಣಿಯವರ ಪ್ರಭಾವದಿಂದ ಬೆಳೆದರು. ಅಸಂಖ್ಯ ಸಹಾಯಾರ್ಥ ಆಟಗಳಲ್ಲಿ ಗಲ್ಲಾಪೆಟ್ಟಿಗೆ ತುಂಬಲು ಚಿಟ್ಟಾಣಿ ನಿಮಿತ್ತರಾದರು. ಅವರ ಶೈಲಿ, ಸಂಪ್ರದಾಯ, ಪರಂಪರೆಯನ್ನು ಶಾಶ್ವತಗೊಳಿಸಲು ಸೌಧವೊಂದು ನಿರ್ಮಾಣವಾಗುತ್ತಿದೆ.

ಕೆರೆಮನೆ ಶಿವಾನಂದ ಹೆಗಡೆ
ರಾಷ್ಟ್ರದ ವಿವಿಧ ನಾಟ್ಯ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ತರಲು ಶಿವಾನಂದ ಯಶಸ್ವಿಯಾಗಿದ್ದಾರೆ. ಯಕ್ಷಗಾನ ವಿವಿಧ ಘರಾಣೆಗಳ ಮುತ್ತುಗಳನ್ನು ಯಕ್ಷಾಂಗಣದಲ್ಲಿ ಪೋಣಿಸುವ, ಎಲ್ಲ ವಿಶಿಷ್ಟತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಶಿವಾನಂದ ಮಾಡುತ್ತಾರೆ. ಯಶಸ್ಸನ್ನು ದಾಖಲಿಸುತ್ತಾರೆ ಎಂದು ಅವರ ಅಭಿಮಾನಿಗಳಲ್ಲಿ ವಿಶ್ವಾಸವಿದೆ. ಯಕ್ಷಲೋಕದ ಕದನ ಕುತೂಹಲದ ದಿನಗಳು ಮುಗಿದು ಕೊಡುವ ಕೊಳ್ಳುವ ಒಲವಿನ ಸ್ನೇಹದ ದಿನಗಳು ಆರಂಭವಾಗಲಿದೆ. ಕಲಾಕ್ಷೇತ್ರದಲ್ಲಿ ಇದೊಂದು ಸದ್ದಿಲ್ಲದ ಕ್ರಾಂತಿ. ಅದಕ್ಕೆ ಇಂದು ಗಣಪತಿ ಪೂಜೆ ನಡೆಯಲಿದೆ.

ರಾಜಕಾರಣದಂತೆ ಯಕ್ಷಕಾರಣ ಎಂಬುದು ಕಣ್ಣಿಗೆ ಕಾಣದ ಕಾದಾಟದ ಕ್ಷೇತ್ರ. ಯಕ್ಷಗಾನದವರು ಎಂದೂ ಒಂದಾಗುವುದಿಲ್ಲ , ಪರಸ್ಪರ ಗೌರವಿಸುವುದಿಲ್ಲ ಎಂಬುದು ಇಲ್ಲಿಯವರೆಗೆ ನಡೆದು ಬಂದ ಸತ್ಯ. ದೇಶದ ಎಲ್ಲ ಶ್ರೇಷ್ಠ ಪಾರಂಪರಿಕ ಕಲಾಪ್ರದರ್ಶನಗಳನ್ನು 5 ವರ್ಷಗಳಿಂದ ಏರ್ಪಡಿಸುತ್ತ ತಂದೆ ಶಂಭು ಹೆಗಡೆಯವರಿಗೆ ಅತ್ಯುನ್ನತ ಶೃದ್ಧಾಂಜಲಿ ಅರ್ಪಿಸುತ್ತಿರುವ ಕೆರೆಮನೆ ಶಿವಾನಂದ ಹೆಗಡೆ ಈ ಬಾರಿ ತನ್ನ ಅಜ್ಜನ ಹೆಸರಿನ ಪ್ರಶಸ್ತಿಯನ್ನು ಚಿಟ್ಟಾಣಿಯವರಿಗೆ ಕೊಡುತ್ತಿರುವುದು ಒಂದು ಐತಿಹಾಸಿಕ ಸಂಗತಿ. ಕೆರೆಮನೆ, ಚಿಟ್ಟಾಣಿ, ಹಾಸ್ಯಗಾರ, ಜಲವಳ್ಳಿ, ಕೊಂಡದಕುಳಿ, ಕಣ್ಣಿ, ತೋಟಿ ಮೊದಲಾದ ಯಕ್ಷಲೋಕದ ಮುತ್ತುಗಳೆಲ್ಲ ತನ್ನ ಪ್ರತ್ಯೇಕವಾಗಿದ್ದರೆ ಕಾಲಚಕ್ರದಲ್ಲಿ ಕಳೆದು ಹೋಗುವ ಸಾಧ್ಯತೆ ಹೆಚ್ಚು. ಇದನ್ನು ಉಳಿಸಿಕೊಂಡು ಒಂದು ಸರವಾಗಿ ಪೋಣಿಸಿಕೊಂಡರೆ ಜಗತ್ತಿನ ಪಾರಂಪರಿಕ ಕಲಾಲೋಕಕ್ಕೆ ದೊಡ್ಡ ಕೊಡುಗೆಯಾಗುತ್ತದೆ. ಎಲ್ಲ ಪರಂಪರೆಗಳೂ ಉಳಿಯುತ್ತದೆ. ಪರಸ್ಪರ ಕಾರ್ಯಕ್ರಮ ನೀಡುತ್ತ, ಒಂದಾಗಿ ವಿಚಾರ ವಿನಿಮಯ ಮಾಡುತ್ತ ತಾಲೂಕಿನ ಕಲಾಶ್ರೇಷ್ಠತೆಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ.





ಕೃಪೆ : http://kannada.yahoo.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ